ಭಟ್ಕಳ, ಮಾರ್ಚ್ 4;ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೆಳೆಯನ್ನು ಬೆಳೆದು ಕೃಷಿಯನ್ನು ಮಾಡುತ್ತ ಬಂದಿರುವ ಇಲ್ಲಿನ ಸಾಗರ ರಸ್ತೆ ಸನಿಹದ ಗೊದ್ದನಕೋಡಿಯ ನದಿ ತೀರದ ಅರಣ್ಯ ಭೂಮಿಯಲ್ಲಿ ಕಷ್ಟ ಪಟ್ಟು ಬೆಳೆಸಲಾದ ಬಾಳೆ ಹಾಗೂ ಅಡಿಕೆ ತೋಟವನ್ನು ಅರಣ್ಯಾಧಿಕಾರಿಗಳು ಕತ್ತರಿಸಿ ನಾಶಪಡಿಸಿದ್ದು ಲಕ್ಷಾಂತರ ರೂ ನಷ್ಟವನ್ನು ಅನುಭವಿಸಿದ ಯುವ ರೈತರಲ್ಲಿ ಒರ್ವ ರೈತನು ಇದನ್ನು ಬಲವಾಗಿ ಮನಸ್ಸಿಗೆ ಹಚ್ಚಿಕೊಂಡು ಆಹಾರ ಸೇವಿಸದೇ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರಾಮ ಮೋಗೇರ್ ಸೇರಿದಂತೆ ಡಿ.ವೈಎಸ್.ಪಿ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಭೇಟಿ ನೀಡಿ ಯುವ ರೈತನನ್ನು ಸಾಂತ್ವಾನ ಹೇಳಿದ್ದಾರೆ. ಅಸ್ವಸ್ಥ ಯುವ ರೈತನನ್ನು ಮೂಡಭಟ್ಕಳದ ವಾಸು ನಾಯ್ಕ ಎಂದು ಗುರುತಿಸಲಾಗಿದೆ. ಈತನು ತಾನು ಬೆಳೆದ ಲಕ್ಷಾಂತರ ರೂಪಾಯಿ ಬೆಳೆಯನ್ನು ಅರಣ್ಯ ಇಲಾಖೆಯವರು ತನ್ನ ಎದುರಲ್ಲೆ ಕಡಿದು ಹಾಕಿದ್ದನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡು ಊಟ ನಿದ್ರೆಯನ್ನು ಬಿಟ್ಟು ಅದೇ ಗುಂಗಿನಲ್ಲಿ ದಿನಕಳೆಯುತ್ತಿದ್ದನು ಎನ್ನಲಗಿದ್ದು ಇದು ಮಾನಸಿಕ ಅಸ್ವಸ್ಥೆಗೆ ಕಾರಣವಾಗಿದೆ ಎನ್ನಲಗಿದೆ.
ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಲಖಂಡದ ಸರ್ವೆ ನಂಬರ್ ೬೧ ರ ಅರಣ್ಯ ಭೂಮಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಣಾರದ ವಿನಾಯಕ ಶೇಷ ಶೆಟ್ಟಿ ಹಾಗೂ ಮೂಡಭಟ್ಕಳದದ ವಾಸು ನಾಯ್ಕ ಎಂಬುವವರು ಮನೆ ಕಟ್ಟಿಕೊಂಡು ಬಾಳೆ ಹಾಗೂ ಅಡಿಕೆ ತೋಟವನ್ನು ಬೆಳೆಸಿದ್ದರು. ಇವರು ಅತಿಕ್ರಮಣ ನಡೆಸುವ ಸಂದರ್ಭದಲ್ಲಿ ಏನೂ ತೊಂದರೆಯನ್ನುಂಟು ಮಾಡದ ಅರಣ್ಯಾಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಿಢೀರ್ ಭೇಟಿ ನೀಡಿ ಫಲ ಬರಲು ಆರಂಭಿಸಿದ್ದ ಬಾಳೆ ಹಾಗೂ ಅಡಿಕೆ ಮರಗಳನ್ನೂ ಸಂಪೂರ್ಣ ಕತ್ತರಿಸಿ ನಾಶ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದು ಅರಣ್ಯಾಧಿಕಾರಿಗಳು ತೋಟ ಕಾಯುತ್ತಿದ್ದ ವಾಸು ನಾಯ್ಕ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ತನ್ನ ಮೊಬೈಲ ಕಸಿದುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ವಾಸು ನಾಯ್ಕ ಹಾಗೂ ವಿನಾಯಕ ಶೆಟ್ಟಿ ಘಟನೆಯಿಂದ ಮನನೊಂದು ಆತ್ಮ ಹತ್ಯೆಗೂ ಪ್ರಯತ್ನ ನಡೆಸಿದ್ದು, ಮನೆಯವರು ತಡೆದಿದ್ದರು ಎನ್ನಲಾಗಿದೆ. ಇಬ್ಬರೂ ಯುವಕರು ತಾವು ಹಲವು ವರ್ಷಗಳಿಂದ ಕಷ್ಟು ಪಟ್ಟು ಬೆಳೆದ ಬೆಳೆ ಒಂದೇ ತಾಸಿನಲ್ಲಿ ಅರಣ್ಯಾಧಿಕಾರಿಗಳು ಧ್ವಂಸ ಮಾಡಿದ ಬಗ್ಗೆ ಮನಸಿಕವಾಗಿ ನೊಂದಿದ್ದು, ಸರಿಯಾಗಿ ಆಹಾರವನ್ನೇ ಸೇವಿಸುತ್ತಿಲ್ಲ. ನಿನ್ನೆ ಆಸ್ಪತ್ರೆಗೆ ದಾಖಲಾದ ವಾಸು ನಾಯ್ಕನಿಗೆ ವೈದ್ಯರು ಚಿಕಿತ್ಸೆ ನೀಡಿದ್ದು ಈತ ಮಾನಸಿಕವಾಗಿ ತೀರಾ ನೊಂದಿದ್ದು, ಘಟನೆಯನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಾನೆ. ಆತನಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಅತಿಕ್ರಮಣದಾರರ ಹೋರಾಟ ಸಮಿತಿ ಭೇಟಿ..............
ನಿನ್ನೆ ಬೆಳಿಗ್ಗೆ ವಾಸು ನಾಯ್ಕ ಅರಣ್ಯಾ ಇಲಾಖೆಯವರ ದೌರ್ಜನ್ಯಕ್ಕೆ ನೊಂದು ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ತಿಳಿದ ತಾಲೂಕು ಅರಣ್ಯ ಅತಿಕ್ರಮಣ ಹೋರಾಟಗಾರರ ಸಮಿತಿಯ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಯುವಕನಿಗೆ ಸಾಂತ್ವಾನ ಹೇಳಿದರು.
ನೊಂದ ಯುವಕನಿಗೆ ಧೈರ್ಯ ತಂದುಕೊಳ್ಳುವಂತೆ ಸಾಂತ್ವಾನ ಹೇಳಿದ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಪ್ರಧಾನ ಕಾರ್ಯದರ್ಶಿ ಬಾಷಾ, ಉಪಾಧ್ಯಕ್ಷರಾದ ಗಣಪತಿ ನಾಯ್ಕ, ಕೆ ಸುಲೇಮಾನ, ಚಂದ್ರು ನಾಯ್ಕ,ಸಮೀಮಾ ಭಾನು ಮುಂತಾದವರು ನಿಮ್ಮ ಪರ ಹೋರಾಟಕ್ಕೆ ಸಮಿತಿ ಕಟಿಬದ್ದವಾಗಿದೆ ಎಂಬ ಭರವಸೆಯ ಮಾತುಗಳನ್ನು ಆಡಿದರು. ಇದೇ ಸಂದರ್ಭದಲ್ಲಿ ಜಿಪಂ ಸದಸ್ಯ ಎಂ ಎಂ ನಾಯ್ಕ, ತಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದೇವಾಡಿಗ ಸಹ ಆಸ್ಪತ್ರೆಗೆ ಭೇಟಿ ನೀಡಿ ನೊಂದ ಯುವಕ ವಾಸು ನಾಯ್ಕನನ್ನು ಮಾತನಾಡಿಸಿ ಧೈರ್ಯ ತುಂಬಿದರು.
ಡಿವೈಸ್ಪಿ ವೇದಮೂರ್ತಿ ಭೇಟಿ.............
ನಿನ್ನೆ ಬೆಳಿಗ್ಗೆ ಡಿವೈಸ್ಪಿ ಡಾ. ಸಿ ಬಿ ವೇದಮೂರ್ತಿ ಸಹ ಆಸ್ಪತ್ರೆಗೆ ಭೇಟಿ ನೀಡಿ ವಾಸು ನಾಯ್ಕನನ್ನು ಮಾತನಾಡಿಸಿ ವಿವರ ಪಡೆದರು. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಕಳೆದು ಹಲವು ವರ್ಷಗಳಿಂದ ಗೊದ್ದನಕೋಡಿಯಲ್ಲಿ ಈ ಯುವಕರು ಕಷ್ಟು ಪಟ್ಟು ಬೆಳೆದ ತೋಟವನ್ನು ಅರಣ್ಯ ಅಧಿಕಾರಿಗಳು ನಾಶಪಡಿಸಿದ್ದರಿಂದ ವಾಸು ನಾಯ್ಕ ನೊಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಜೀವಕ್ಕೇನಾದರೂ ಆದರೆ ಅದಕ್ಕೆ ಅರಣ್ಯಾಧಿಕಾರಿಗಳೇ ಹೊಣೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು. ರಾಮಾ ಮೊಗೇರರ ಮಾತಿಗೆ ಸ್ಪಂದಿಸಿದ ಡಿವೈಸ್ಪಿಗೆ ಸ್ಥಳಕ್ಕೆ ಗ್ರಾಮೀಣ ಠಾಣೆಯ ಎಸೈ ಹಾಗೂ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು